ಎಡ್ಸ್‍ಚ್ಮಿಡ್, ಕ್ಯಾಸಿಮಿಲ್
	1890-1939. ಒಂದನೆಯ ಮಹಾಯುದ್ಧ ಮುಕ್ತಾಯವಾದೊಡನೆ ಅಭಿವ್ಯಕ್ತವಾದದ ಸಿದ್ಧಾಂತಗಳನ್ನು ಕ್ರೋಡೀಕರಿಸಿ, ಅವಕ್ಕೆ ಒಂದು ರೂಪ ಕೊಟ್ಟ ಜರ್ಮನಿಯ ಕವಿ. ವಿಮರ್ಶಕ. 1919ರಲ್ಲಿ ಈತನ ಪುಸ್ತಕ ಉಬರ್ ಡೆನ್ ವಿಕ್ಟರಿಸ್ಕೆನ್ ಎಕ್ಸ್‍ಪ್ರೆಷನಿಸ್ಮನ್ ಪ್ರಕಟವಾದಾಗ ಅದು ಅಭಿವ್ಯಕ್ತವಾದಿಗಳ ಸಿದ್ಧಾಂತದ ಪತಾಕೆಯೆಂದು ಪರಿಗಣಿತವಾಯಿತು. ಹೊರಜಗತ್ತು ವಾಸ್ತವವೆಂಬುದನ್ನು ಅಲ್ಲಗಳೆದು, ಆ ಜಗತ್ತಿನ ತತ್ತ್ವ, ದರ್ಶನ ಮತ್ತು ಕಲೆಗಳ ದೃಷ್ಟಿಕೋನಗಳನ್ನು ನಿರಾಕರಿಸಿ, ತಮ್ಮೊಳಗೇ ಹೊಸತೊಂದು ವಾಸ್ತವತೆಯನ್ನು ಪ್ರತಿವ್ಯಕ್ತಿಯೂ ಅರಸಬೇಕು. ಅವ್ಯಕ್ತದೊಂದಿಗೆ ಮಾನವನಿಗೆ ಹೊಸತೊಂದು ಆಂತರಿಕ ಸಂಬಂಧವಿದೆ; ಅದನ್ನು ಅರಸಿ ಅನುಭಾವದ ಬಗೆಯಲ್ಲಿ ಮಸಕು ಮಸಕಾದರೂ ಪ್ರಬಲ ರೀತಿಯಲ್ಲಿ ಅಭಿವ್ಯಕ್ತಪಡಿಸಬೇಕೆಂಬುದೇ ಈತನ ವಾದದ ತಿರುಳು. ಮನುಷ್ಯನ ಮನಸ್ಸಿನ ಮೇಲೆ ಹೊರಜಗತ್ತು ಮೂಡಿಸುವ ಪ್ರಭಾವ ಮುಖ್ಯವಲ್ಲ. ಹೊರಜಗತ್ತಿನ ಮೇಲೆ ಮನುಷ್ಯನ ಮನಸ್ಸು ಚಾಚುವ ನೆರಳೇ ಮುಖ್ಯ- ಎಂಬ ತತ್ತ್ವವನ್ನು ಈತನ ವಿಮರ್ಶನ ಸಿದ್ಧಾಂತದ ಕೃತಿಯೂ ಕಾವ್ಯಗಳೂ ಸಾರುತ್ತವೆ. 1911ರಿಂದಲೇ ಜರ್ಮನಿಯಲ್ಲಿ ಈತನ ಮುಂದಾಳುತನದಲ್ಲಿ ಕೆಲಸಮಾಡುತ್ತಿದ್ದ ಅಭಿವ್ಯಕ್ತಿವಾದಿಗಳು 1919ರಲ್ಲಿ ಈತನ ಪುಸ್ತಕದಲ್ಲಿ ತಮ್ಮ ಸಿದ್ಧಾಂತಕ್ಕೆ ಸರಿಯಾದ ನೆಲೆ, ನಿಲವನ್ನು ಪಡೆದುಕೊಂಡು ಸಂಘಟಿತರಾದರು.
	 (ಎಸ್.ಎ.ಎನ್.)